ಆಗಂತುಕ ವಿಶೇಷಣ
ಒಂದು ವಸ್ತುವಿನ ಗುಣಲಕ್ಷಣ ನಿರ್ದೇಶನದ ಐದು ವಿಧಗಳಲ್ಲಿ ಕೊನೆಯದು (ಆಕ್ಸಿಡೆಂಟ್: ಆಕ್ಸಿಡೆನ್ಸ್). ಪ್ರಧಾನ ಜಾತಿ (ಜೀನಸ್) ಉಪಜಾತಿ (ಸ್ಫೀಷಸ್), ವೈಲಕ್ಷಣ (ಡಿಫರೆನ್ಷಿಯ), ಗುಣ (ಪ್ರೊಪ್ರಿಯಂ) ಇವು ಅನುಕ್ರಮವಾಗಿ ಉಳಿದ ನಾಲ್ಕು. ಈ ಪಾರಿಭಾಷಿಕ ಹೆಸರುಗಳನ್ನು ಮೊದಲಿಗೆ ಕೊಟ್ಟವ ಅರಿಸ್ಟಾಟಲ್.

	ಐದನೆಯ ಆಗುಂತುಕ ವಿಶೇಷಣಕ್ಕೂ ಉಳಿದ ನಾಲ್ಕಕ್ಕೂ ಇರುವ ವ್ಯತ್ಯಾಸವೇನೆಂದರೆ: ಮೊದಲನೆಯದು ನಾಲ್ಕು ಒಂದಲ್ಲ ಒಂದು ರೀತಿಯಲ್ಲಿ ವಸ್ತುವಿಗೆ ಆಂತರಿಕವಾದ ವಿಶೇಷಣಗಳು. ಐದನೆಯದು ವಸ್ತುವಿಗೆ ಬಾಹಿರವಾದದ್ದು. ಅನಗತ್ಯವಾದುದ್ದು. ಉದಾಹರಣೆಗೆ ಅವರೆಯನ್ನು ಕುರಿತು; ಇದು ದ್ವಿದಳ ಧಾನ್ಯ ಜಾತಿಗೆ ಸೇರಿದ್ದು. ದ್ವಿದಳ ಧಾನ್ಯದ ಉಪಜಾತಿ, ತೊಗರಿಗಿಂತ ಭಿನ್ನ. ಸಾರಜನಕಾಂಶ ಹೆಚ್ಚು- ಈ ಮುಂತಾದ ವಿಶೇಷಣಗಳು. ಅವರೆಗೆ ಆಂತರಿಕ. ಈ ವಿಶೇಷಣಗಳಿಲ್ಲದೆ ಅವರೆ ಇಲ್ಲ. ಆದರೆ ಅವರೆ ಬಿಸ್ಕತ್ ಬಣ್ಣದ್ದು. ಕಂದು ಬಣ್ಣದ್ದು ಎಂಬ - ವಿಶೇಷಣಗಳು ಆಂತರಿಕವಲ್ಲ. ಆವರೆಯಾಗಬೇಕಾದರೆ ಬಿಸ್ಕತ್ ಬಣ್ಣದ್ದೇ ಆಗಿರಬೇಕಾಗಿಲ್ಲ. ಧಾರವಾಡದಲ್ಲಿ ಬೆಳೆದದ್ದು, ಮೈಸೂರಿನಲ್ಲಿ ಬೆಳೆದದ್ದು ಎಂಬುದೂ ಆಗುಂತುಕ ವಿಶೇಷಣ. ಏಕೆಂದರೆ ಅವರೆಕಾಳು ಬೆಳೆಯಬೇಕಾದರೆ ಧಾರವಾಡ ಅಥವಾ ಮೈಸೂರು ಪ್ರದೇಶವೇ ಆಗಬೇಕಾಗಿಲ್ಲ. ಮೇಲೆ ಹೇಳಿದ ಆಗುಂತುಕ ವಿಶೇಷಣಗಳಲ್ಲಿ ಒಂದು ವ್ಯತ್ಯಾಸವಿದೆ. ಬಿಸ್ಕತ್ ಬಣ್ಣ ಅಥವಾ ಕಂದು ಬಣ್ಣ ಆ ಕಾಳಿನಿಂದ ಪ್ರತ್ಯೇಕಿಸಲಾಗಿದ್ದು, ಆದರೆ ಇದು ಈಗ ಗೋಣಿ ಚೀಲದಲ್ಲಿದ್ದದ್ದು, ಗುಡ್ಡಾಣದಲ್ಲಿದ್ದದ್ದು ಎಂಬ ವಿಶೇಷಣಗಳು ಆ ಕಾಳಿನಿಂದ ಪ್ರತ್ಯೇಕಿಸಬಹುದಾದವು. ಈ ಎರಡರಲ್ಲಿ ಮೊದಲ ಬಗೆಯ ಆಗುಂತುಕ ವಿಶೇಷಣವನ್ನು ಪ್ರತ್ಯೇಕಿಸಲಾಗದ ಆಗುಂತುಕ ವಿಶೇಷಣವೆಂದೂ (ಇನ್‍ಸೆಪರೆಬಲ್ ಆಕ್ಸಿಡೆನ್ಸ್), ಎರಡನೆ ಬಗೆಯದನ್ನು ಪ್ರತ್ಯೇಕಿಸಬಲ್ಲ ಆಗುಂತುಕ ವಿಶೇಷಣವೆಂದೂ ತಾರ್ಕಿಕರು ಕರೆದಿರುತ್ತಾರೆ.						 	
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ